ನವಶಕ್ತಿ
ಮುಂಬಯಿಯಿಂದ ಪ್ರಕಟವಾಗುವ ಮರಾಠಿ ದಿನಪತ್ರಿಕೆ. 1932ರಲ್ಲಿ ಪ್ರಾರಂಭವಾಯಿತು. ಜಾವಡೇಕರ್ ಪ್ರಥಮ ಸಂಪಾದಕರು.
ಸ್ವಾತಂತ್ರ್ಯ ಹೋರಾಟದ ಕಹಳೆಗೆ ಓಗೊಟ್ಟು, ಸಂಪರ್ಕ ಮಾಧ್ಯಮಗಳ ಮೇಲಿದ್ದ ಬ್ರಿಟಿಷ್ ಪ್ರಭುತ್ವವನ್ನು ಧಿಕ್ಕರಿಸಿ ಪತ್ರಿಕೋದ್ಯಮದ ಮೂಲಕ ರಾಷ್ಟ್ರೀಯ ಹೋರಾಟ ಪ್ರಬಲವಾಗುವಂತೆ ಮಾಡಲು ಫ್ರೀ ಪ್ರೆಸ್ ಆಫ್ ಇಂಡಿಯ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಗಾಂಧೀವಾದಿಯೂ ಪತ್ರಿಕೋದ್ಯಮಿಯೂ ಆಗಿದ್ದ ಎಸ್. ಸದಾನಂದ್ ಅವರು ಈ ಪತ್ರಿಕಾ ಸಂಸ್ಥೆಯನ್ನು ಸ್ಥಾಪಿಸಿದರು. ಇದರ ವತಿಯಿಂದ ಫ್ರೀ ಪ್ರೆಸ್ ಆಫ್ ಇಂಡಿಯಾ ನ್ಯೂಸ್ ಏಜೆನ್ಸಿ ಎಂಬ ಸುದ್ದಿ ಸಂಸ್ಥೆ, ಫ್ರೀ ಪ್ರೆಸ್ ಜರ್ನಲ್ ಮತ್ತು ಇಂಡಿಯನ್ ಎಕ್ಸ್‍ಪ್ರೆಸ್ ಎಂಬ ಪತ್ರಿಕೆಗಳು ಪ್ರಾರಂಭವಾದವು. ಈ ಸಂಸ್ಥೆ ಭಾರತೀಯ ಭಾಷೆಗಳಲ್ಲೂ ಪತ್ರಿಕೆಗಳನ್ನು ಪ್ರಾರಂಭಿಸಿತು. ಮದರಾಸಿನಲ್ಲಿ ದಿನಮಣಿ (ತಮಿಳು), ಮುಂಬಯಿಯಲ್ಲಿ ಜನಶಕ್ತಿ (ಗುಜರಾತಿ) ಹಾಗೂ ನವಶಕ್ತಿ (ಮರಾಠಿ) ಪತ್ರಿಕೆಗಳು ಪ್ರಾರಂಭವಾದವು.

ವಸ್ತುನಿಷ್ಠ ಸುದ್ದಿ, ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಸದಾ ಎಚ್ಚರಿಕೆಯ ದೃಷ್ಟಿ, ಸ್ವತಂತ್ರ ರಾಜಕೀಯ ನಿಲುವು, ನಿರ್ಭಯ ಸಂಪಾದಕೀಯ ನೀತಿ-ಇವು ಪತ್ರಿಕೆಯ ಇಂದಿನ ವೈಶಿಷ್ಟ್ಯಗಳಾಗಿವೆ. ಮರಾಠಿ ಪತ್ರಿಕೋದ್ಯಮದ ಅನೇಕ ಹೆಸರಾಂತ ಹಿರಿಯ ಮತ್ತು ಕಿರಿಯ ಪತ್ರಕರ್ತರು ನವಶಕ್ತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಈಗ ಇದು ಇಂಡಿಯನ್ ನ್ಯಾಷನಲ್ ಪ್ರೆಸ್ ಲಿಮಿಟೆಡ್ ಸಂಸ್ಥೆಯ ಒಡೆತನದಲ್ಲಿದೆ. ಇದರ ದೈನಿಕ ಪ್ರಸಾರ 44,000 ವನ್ನು ಮೀರಿದೆ. ಡಿ. ಆರ್. ಬೇಹರೇ ಈಗಿನ ಸಂಪಾದಕರು.

(ಕೆ.ಪಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ